ಹ್ಯಾಡ್ಲೀ, ರಿಚರ್ಡ್
	1951-. ನ್ಯೂಜಿóಲೆಂಡ್‍ನ ಖ್ಯಾತ ಕ್ರಿಕೆಟ್ ಆಲ್‍ರೌಂಡರ್, ಪ್ರಪಂಚದ ಅತ್ಯಂತ ವೇಗದ ಬೌಲರ್. 1951 ಜುಲೈ 3ರಂದು ನ್ಯೂಜಿóಲೆಂಡ್‍ನ ಕ್ರೈಸ್ಟ್‍ಚರ್ಚ್‍ನಲ್ಲಿ ಜನಿಸಿದ. ಕ್ಯಾಂಟ್‍ಬರಿ, ಟಾಸ್‍ಮೇನಿಯ, ನಾಟಿಂಗ್ಯಾಂ ಷೈರ್ ಮತ್ತು ನ್ಯೂಜಿóಲೆಂಡ್ ಪರವಾಗಿ ಆಡಿದ. ಈತ ಎಡಗೈ ಬ್ಯಾಟ್ಸ್‍ಮನ್‍ನೂ ಬಲಗೈ ಬಿರುಸುವೇಗದ ಬೌಲರ್‍ನೂ ಆಗಿದ್ದಾನೆ. 86 ಟೆಸ್ಟ್ ಮ್ಯಾಚ್‍ಗಳನ್ನಾಡಿ 431 ವಿಕೆಟ್ ಪಡೆದು ಪ್ರಪಂಚದಾಖಲೆ ಮಾಡಿದ. 115 ಒಂದು ದಿನದ ಪಂದ್ಯಗಳನ್ನಾಡಿದ್ದಾನೆ. ಪಂದ್ಯದಲ್ಲಿ 9 ಬಾರಿ 10 ವಿಕೆಟ್ ಪಡೆದ ಸಾಧನೆ, ಟೆಸ್ಟ್ ಇನಿಂಗ್ಸ್‍ನಲ್ಲಿ 36 ಬಾರಿ 5 ವಿಕೆಟ್ ಗಳಿಸಿದ ಸಾಧನೆ. ಇದು ಪ್ರಪಂಚದಾಖಲೆ. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 1490 ವಿಕೆಟ್ ಗಳಿಸಿದ್ದಾನೆ. 1984ರ ಒಂದೇ ಸೀಸನ್‍ನಲ್ಲಿ 1000 ರನ್‍ಗಳನ್ನೂ 100 ವಿಕೆಟ್‍ಗಳನ್ನೂ ಗಳಿಸಿ ದಾಖಲೆ ಮಾಡಿದ. ಇದು ಇಂಗ್ಲಿಷ್ ಕೌಂಟಿಯ ಡಬಲ್ ಗಳಿಕೆ. ಒಂದೇ ಇನಿಂಗ್ಸ್‍ನಲ್ಲಿ ಒಟ್ಟು 102 ಬಾರಿ 5 ವಿಕೆಟ್ ಪಡೆದದ್ದೂ ಒಂದು ದಾಖಲೆ. 1990 ಫೆಬ್ರವರಿ 4 ರಂದು 400 ಟೆಸ್ಟ್ ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದ. 

	ಕ್ರಿಕೆಟ್‍ನಲ್ಲಿ ತೋರಿದ ಸಾಧನೆಗಾಗಿ ಈತನಿಗೆ ಸರ್ ಪದವಿ ದೊರೆತಿದೆ (1990). ಅತ್ಯುತ್ತಮ ಬೌಲಿಂಗ್‍ಗಾಗಿ ಹನ್ನೆರಡು ನಿರಂತರ ಹಾಗೂ ಒಟ್ಟು ಹದಿಮೂರು ಬಾರಿ ವಿನ್ಸರ್ ಕಪ್ ಗಳಿಸಿದ ದಾಖಲೆ ಸ್ಥಾಪಿಸಿದ್ದಾನೆ. ನ್ಯೂಜಿóಲೆಂಡ್‍ನ ವರ್ಷದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಎರಡು ಬಾರಿ ದೊರೆತಿದೆ (1980, 1986). ನ್ಯೂಜಿóಲೆಂಡ್‍ನ ಕಳೆದ 25 ವರ್ಷಗಳ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಅಥ್ಲೆಟ್ ಜಾನ್ ವಾಕರ್‍ನೊಂದಿಗೆ ಲಭ್ಯವಾಗಿದೆ (1987). ಇದೇ ವರ್ಷ ನ್ಯೂಜಿóಲೆಂಡ್‍ನ ಕಳೆದ ಒಂದು ದಶಕದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯೂ ಲಭಿಸಿದೆ. 

	ಈತನ ಆತ್ಮಚರಿತ್ರೆ ರಿದಮ್ ಅಂಡ್ ಸ್ವಿಂಗ್ ಪ್ರಕಟವಾಗಿದೆ (1989).	
	
		(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ